ಯೊಹಾನ
ಯೇಸುಕ್ರಿಸ್ತ ಮೊಟ್ಟ ಮೊದಲು ತನ್ನ ಸೇವೆಗೆ ಕರೆದ ನಾಲ್ವರು ಶಿಷ್ಯರಲ್ಲಿ ಒಬ್ಬ (ಜಾನ್). ಈತ ಹೊಸ ಒಡಂಬಡಿಕೆಯಲ್ಲಿ ಮೂರು ಪತ್ರಿಕೆಗಳನ್ನು ನಾಲ್ಕನೆ ಸುವಾರ್ತೆ ಮತ್ತು ದಿವ್ಯದರ್ಶನ ಅಥವಾ ಕಾಲಜ್ಞಾನದ ಕರ್ತೃ ಎಂದು ಭಾವಿಸಲಾಗಿದೆ. ಈತ ಗೆಲೀಲೀಯಲ್ಲಿ ಬೆಸ್ತನಾಗಿದ್ದ ಜೆಬೆಡಿ ಮತ್ತು ಸಲೋಮೆಯರ ಎರಡನೆಯ ಮಗ. ಈತನ ಅಣ್ಣ ಯಕೋಬ. ಈತನ ತಾಯಿ ಹಾಗೂ ಯೇಸುವಿನ ತಾಯಿ ಇಬ್ಬರೂ ಅಕ್ಕತಂಗಿಯರೆಂದು ಒಂದು ಕಡೆ ಹೇಳಿದೆ. ಈತನ ತಾಯಿ ಸಲೋಮೆ ಯೇಸುವಿನ ಅನುಯಾಯಿಗಳ ಗುಂಪಿನ ವಕ್ತಾರಳಾಗಿದ್ದಳು. ಯಕೋಬ ಹಾಗೂ ಯೊಹನ ಅದಮ್ಯ ಉತ್ಸಾಹ ಮತ್ತು ಮುಂಗೋಪದ ಗುಣಗಳಿಂದ ಯೇಸು ಇವರನ್ನು `ಸಿಡಿಲಿನ ಮರಿಗಳು ಅಥವಾ `ದೊಡ್ಡ ಗಂಟಲಿನ ಉಪದೇಶಕರು ಎಂದು ನಾಮಕರಣ ಮಾಡಿದ್ದ. ಇದಕ್ಕೆ ಈ ಸಹೋದರರು ಸಮೆಟನ್ ನಗರಗಳನ್ನು ನಾಶಮಾಡಲು ಸ್ವರ್ಗದಿಂದ ಅಗ್ನಿಯನ್ನು ಆಹ್ವಾನಿಸಿದರು. ಆದರೆ ಯೇಸು ಇದಕ್ಕೆ ಸಮ್ಮತಿಸಲಿಲ್ಲ. ಇವರಿಬ್ಬರೂ ಸೈಮನ್ ಪೇತ್ರನೊಂದಿಗೆ ಯೇಸುವಿನ ಆಪ್ತ ಅನುಯಾಯಿಗಳ ಕೂಟವೊಂದನ್ನು ಕಟ್ಟಿದರು. ಪುನರುಸ್ಥಾನದ ಅನಂತರ ಯೊಹಾನನು ಪೇತ್ರ ಮತ್ತು ಯಾಕೋಬರೊಂದಿಗೆ ಜೆರುಸಲೆಮ್ ಚರ್ಚನ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸಿದನೆಂಬ ಈತನ ಅಧಿಕಾರದ ನಿದರ್ಶನವು ಹೊಸದಾಗಿ ಮತಾಂತರ ಹೊಂದಿದ ಸಮರಿಯದ ಜನರಿಗೆ ಆಶೀರ್ವಚನ ನೀಡಲು ಪೇತ್ರನೊಂದಿಗೆ ನೀಡಿದ ಭೇಟಿಯಿಂದ ವ್ಯಕ್ತವಾಗುತ್ತದೆ.

	ಯೊಹಾನನ ಜೀವಿತದ ಉತ್ತರಾರ್ಧದ ಚರಿತ್ರೆ ಅಸ್ಪಷ್ಟವಾಗಿದ್ದು ಪುರಾಣ ಕಥೆ, ಐಹಿತ್ಯಗಳಿಂದ ಕೂಡಿದೆ. ಕ್ರಿ.ಸ. 2 ನೆಯ ಶತಮಾನದ ಅತ್ಯಂದಲ್ಲಿ ಯೊಹಾನನ ಸಮಾಧಿಯು ಎಫಿಸಸ್‍ನಲ್ಲಿದ್ದು ಇವನು ಅಲ್ಲಿ ಪೌರೋಹಿತ್ಯ ಮಾಡುವ ಅರ್ಚಕನಾಗಿ ಧರ್ಮವೀರ ಹಾಗೂ ಉಪದೇಶಕನಾಗಿ ಕೆಲಸ ನಿರ್ವಹಿಸಿದ್ದ ಎಂದು ಎಫಿಸಸ್‍ನ ಬಿಷಪರು ವಾದಿಸಿದ್ದಾರೆ. ಯೊಹಾನ ಎಫಿಸಸ್‍ನಲ್ಲಿ ತನ್ನ ಸುವಾರ್ತೆ ಮತ್ತು ಪತ್ರಿಕೆಗಳನ್ನು ಹಾಗೂ ಪಟ್ಮೊಸ್‍ನಲ್ಲಿ ದಿವ್ಯದರ್ಶನ ಅಥವಾ ಕಾಲಜ್ಞಾನವನ್ನು ಬರೆದ. ಎಫಿಸಸ್‍ನಲ್ಲಿಯೇ ಮೃತನಾದ ಎಂದು ಕ್ರಿ.ಶ. 180ರಲ್ಲಿದ್ದ ಲಿಯೋನ್ಸ್‍ನ ಬಿಷಪರು ಹೇಳಿದ್ದಾರೆ. ಪಶ್ಚಿಮ ದೇಶಗಳಲ್ಲಿಯೂ ಈತನ ಬಗೆಗೆ ಹಲವು ಐತಿಹ್ಯಗಳು ಪ್ರಚಲಿತವಾಗಿವೆ. ಕ್ರಿ.ಶ 2ನೆಯ ಶತಮಾನದ ಉತ್ತರ ಆಫ್ರಿಕದ ಟರ್ಟಿಲಿಯನ್ ಎಂಬ ದೇವತಾಶಾಸ್ತ್ರಜ್ಞನು ಯೊಹಾನ ಕುದಿಯುವ ಎಣ್ಣೆಯಲ್ಲಿ ಧುಮಿಕಿ ಅದರಿಂದ ಪವಾಡ ಸದೃಶ ರೀತಿಯಲ್ಲಿ ಸ್ವಲ್ಪವೂ ಹಾನಿಗೊಳ್ಳದೆ ಮೇಲೆದ್ದು ಬಂದ ಎಂದು ವರದಿ ಮಾಡಿದ್ದಾನೆ. ಕ್ರಿ.ಶ. 7ನೆಯ ಶತಮಾನದ ಅವಧಿಯಲ್ಲಿ ಈ ವಿವರ ಲ್ಯಾಟರಾನ್ ಅರಮನೆಯಲ್ಲಿ ಮತ್ತು ರೋಮಿನ ಲ್ಯಾಟಿನ್‍ಗೇಟ್ ಎಂಬ ದ್ವಾರದಲ್ಲಿ ಚಿತ್ರಣಗೊಂಡಿದೆ. ಪ್ರತಿವರ್ಷ ಮೇ ತಿಂಗಳ 6ರಂದು ಆಚರಿಸಲಾಗುತ್ತಿದ್ದ ಯೊಹಾನನ ವಾರ್ಷಿಕೋತ್ಸವವನ್ನು ಡಿಸೆಂಬರ್ 27 ರಂದು ಆಚರಿಸಲಾಗುತ್ತಿದೆ. ಹಳೆಯ ಒಡಂಬಡಿಕೆಯ ಪ್ರಕಾರ ದೇವದೂತರೂ ಸಾವನ್ನಪ್ಪುತ್ತಾರೆ. ಆದರೆ ಅನಂತರದ ಸಂಪ್ರದಾಯಗಳಲ್ಲಿ ಈತ ಇನೋ ಮತ್ತು ಎಲಿಜಾಹ್‍ರಂತೆ ಸ್ವರ್ಗಕ್ಕೆ ಹೋದ ಎಂದು ನಂಬಲಾಗಿದೆ.
(ಎಸ್.ಎ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ